Friday, July 26, 2013

ರೇಡಿಯೋ ಕಾಲ

                                            ಮೊನ್ನೆ ಔಟರ್ ರಿಂಗ್ ರೋಡ್ ಮ್ಯಾಲೆ  ಆಫೀಸ್ ಇಂದ ಮನಿಗೆ ಬರೋವಾಗ ಎರಡು ತಾಸಿಯಾನ ಪ್ರಯಾಣ ಬ್ಯಾಸರ ಆಗಬಾರ್ದು ಅಂತ ಮೊಬೈಲ್ ಒಳಗಿನ ರೇಡಿಯೋ ಹಚ್ಚಿದೆ..ಸ್ಟೇಶನ್ ಬದ್ಲಿ ಮಾಡೋ ಮುಂದ ವಿವಿಧ ಭಾರತಿ ಬಂತು..ಅದ್ರೊಳಗs ಸಲ್ಪ ಕೇಳೋಣ ಅಂತ ಬ್ಯಾರೆ ಬದ್ಲಿ  ಮಾಡ್ಲಿಲ್ಲ..ಒಂದs  ನಿಮಿಷಕ್ಕ ಮನಸ್ಸು 20-25 ವರ್ಷ ಹಿಂದಕ್ಕ ಹೋತು..
                      ಆವಾಗಿನ್ನ ಟೀವಿ ಬಂದಿದಿಲ್ಲ..ಮನರಂಜನೆ ಅಂದ್ರ ರೇಡಿಯೋ ಒಂದs..22 ಇಂಚು ಡಬ್ಬಿ ಇರತಿತ್ತು ..ಅದು ಗಣಪತಿ ಹಂಗ ಒಂದು ಮಾಡ್ದಾಗ ಕೂತಿರ್ತಿತ್ತು,ಧೂಳು ಬೀಳಬಾರ್ದು ಅಂತ ಒಂದು ಬೇಡ್‌ಶೀಟ್ ಮಡಚಿ ಹೋಚಿಕೊಂಡಿರ್ತಿತ್ತು. ಅದರ ಕೆಲಸ ಮುಂಜಾನೆ ಆಕಾಶ್ ವಾಣಿ ಸಿಗ್ನಿಚರ್ ಟ್ಯೂನ್ ಇಂದ ಸುರು ಆಗ್ತಿತ್ತು..ಆಮೇಲೆ 6 ಗಂಟೆಗೆ ಸಂಸ್ಕ್ರತ ವಾರ್ತೆಗಳು.ಸಂಸ್ಕ್ರತ ಬರ್ತಿದ್ದಿಲ್ಲ ಅಂದ್ರು ಕೇಳಿಕ್ಕೆ ಒಂದು ಥರ ಹೆಮ್ಮೆ..ಹಾ..ಆ ವಾರ್ತೆಗಳು ಕೇಳೋದಕ್ಕ ಇನ್ನೂಂದು ಕಾರಣ ಅಂದ್ರ ಟೈಮ್ ಗೊತ್ತಾಗ್ಲಿಕ್ಕೆ. ಈಗಿನ ಹಂಗ ಕೈ ಒಳಗ ವಾಚ್ ಇರ್ತಿದ್ದಿಲ್ಲ..ಮನಿಗೆ ಒಂದs  ಗಡಿಯಾರ ಗ್ವಾಡಿ ಮ್ಯಾಲೆ ಕೂತಿರ್ತಿತ್ತು..ಅದನ್ನ ನೋಡೋ ಟೈಮ್ ಇರ್ತಿದ್ದಿಲ್ಲ..ಸಾಲಿಗೆ ಹೋಗೋ ತಯಾರಿ ಮಾಡ್ಕೋ ಬೇಕಿತ್ತಲ್ಲ  ..ಆಮೇಲೆ ಮಧ್ಯಾನ ರೇಡಿಯೋ ಒಳಗ ಏನು ಬರ್ತಿತ್ತೋ ಗೊತ್ತಿಲ್ಲ.
                      ಸಂಜಿಮುಂದ ಸಾಲಿ ಇಂದ ಬಂದು ಆಟಾ ಆಡಿ ಮನಿ ಮುಟ್ಟೊದ್ರಾಗ ರೇಡಿಯೋ ಒಳಗ ರೈತರಿಗೆ ಸಲಹೆ ಬರ್ತಿತ್ತು..ಅದು ಆದಮ್ಯಾಲೆ"ಫೌಜಿ ಭಾಯಿ ಯೊಂಕೇಲಿಯೇ ನಮಾಷ್ಕರ್" ಅಂತ  ಜಯಮಾಲಾ ಸಿನೆಮಾ ಹಾಡುಗಳು ಬರತಿತ್ತು..ಯಾವ ಯಾವ ಊರಿಂದ ಯಾವ ಸೈನಿಕರು ರಿಕ್ವೆಸ್ಟ್ ಕಳಿಸಿದ್ರು ಅಂತ ಎಲ್ಲಾರ್ ಹೆಸರು ಹೇಳ್ತಿದ್ರು..ಆಮೇಲೆ ಶಾಸ್ತ್ರೀಯ ಸಂಗೀತ..ಶ್ರೀ ಭೀಮಸೇನ ಜೋಶಿ, ಶ್ರೀ ಬಸವರಾಜ್ ರಾಜಗುರು, ಶ್ರೀ ವೆಂಕಟೇಶ್ ಗೋಡ್ಖಿಂಡಿ ಅವರದೆಲ್ಲ ಹಾಡು ಬರ್ತಿತ್ತು..  ಕಡೀಕ ರಾತ್ರಿ 9 ಗಂಟೆಗೆ "ಮನೆ ಮನೆ ಯಲ್ಲಿ" ಅಂತ ಒಂದು ನಾಟಕ ಬರ್ತಿತ್ತು. ಅದ್ರಾಗ ಮಾನ್ಯ  ಯಮುನಾ ಮೂರ್ತಿ ಅವರ್ದು ಕಾಯಂ ಒಂದು ಪಾತ್ರ..ಅದು ಆದ ಮ್ಯಾಲೆ ವಾರ್ತೆಗಳು ದೆಹಲಿ ಕೇಂದ್ರದ ಸಹ ಪ್ರಸಾರದಿಂದ ಅಂತ ದೇಶದ ಎಲ್ಲ ಸುದ್ದಿ ಕೇಳಿ ಮಲಗೋದು..
                     ಇನ್ನ ಆದಿತ್ಯವಾರ ಮಕ್ಕಳಿಗೆ ಅಂತ ನ "ಗಿಳಿವಿಂಡು" ಬರ್ತಿತ್ತು..ಅದ್ರಾಗ ನಮ್ಮ ಜೇವೂರ್ ಟೀಚರ್ ಕಾರ್ಯಕ್ರಮ ನಡಿಸಿ ಕೊಡ್ತಿದ್ರು..ಮತ್ತ ದಿವಸಕ್ಕ ಮೂರು ಸರ್ತಿ ಕನ್ನಡ ವಾರ್ತೆಗಳು ಬರತಿತ್ತು.. "ವಾರ್ತೆಗಳು..ಓದುತ್ತಿರುವವರು ನಾಗೇಶ್ ಶಾನಭಾಗ್" ಇನ್ನೂ ಕಿವಿ ಒಳಗ ಪ್ರತಿಧ್ವನಿ ಆಗ್ತದ. ಇನ್ನ ಯಾವದಾದ್ರು ಕ್ರಿಕೆಟ್ ಮ್ಯಾಚ್ ನಡಿದಿತ್ತು ಅಂದ್ರ ಇಲ್ಲೆ ವೀಕ್ಷಕ ವಿವರಣೆ ಕನ್ನಡ,ಹಿಂದಿ,ಇಂಗ್ಲೀಷ್ ಮೂರು ಭಾಷಾದಾಗ ಹೇಳ್ತಿದ್ರು..ಅಗ್ದೀ ಇಂಪಾರ್ಟೆಂಟ್ ಟೈಮ್ ಒಳಗ ರೇಡಿಯೋ ದು ಸಿಗ್ನಲ್ ಸಮಾ ಬರ್ತಿದ್ದಿಲ್ಲಾ..ಕರ್ರ್  ಅಂತಿತ್ತು..ಸಮಾ ಬರ್ಲಿ ಅಂತ ಅದರ ಮಾರಿ ಎಡಕ್ಕ ಬಲಕ್ಕ ತಿರಗಿಸಿ, ಅದರ ತಲಿಗೆ , ಬೆನ್ನಿಗೆ ಜೋರಾಗಿ ಹೊಡದ್ರ ಸಮಾತ್ನ್ಯಾಗಿ ಕೇಳಸ್ತಿತ್ತು..
ಅಲಾ ಇವನ ಯಾರೋ ದೂಕಿದ ಹಂಗ ಆತು ಅಂತ ಹಿಂದ ನೋಡಿದ್ರ ಆಗ್ಲೇ ಸಿಲ್ಕ್‌ಬೋರ್ಡ್ ಸಿಗ್ನಲ್ಗೆ ಬಂದು ನಿಂತಿದ್ದೆ..ಹಿಂದಿನ ಗಾಡಿಯವ ನನ್ನ ಬೈಕ್ ಗೆ ಟಚ್ ಮಾಡಿದ್ದ..
                  ಹಸಿರ ಸಿಗ್ನಲ್ ಬಿತ್ತು..ಅವಾ ಸಾರೀ ಅಂದು ಮುಂದ ಹೋದ..ನಾನೂ ಹೊಂಟೆ ಆದ್ರ ನನ್ನ ಮನಸು ರೇಡಿಯೋ ಯುಗ ದಾಟಿ ಟೀವಿ ಯುಗಕ್ಕ ಬಂತು..ಅದನ್ನ ಮುಂದ ಯಾವಾಗರ ಹೇಳ್ತೇನಿ..

Wednesday, July 24, 2013

ಮಳೆ ಬರ್ತಾ ಇದೆ ಅಂತೆ..


ನಮ್ಮ ಮನಿ ಹತ್ರ ಭಾಳ ಖಾಲಿ ಜಾಗ ಇದ್ದದ್ದಕ್ಕ ಮಂದಿ ವಾಕಿಂಗ್ ಗೆ ಬಂದಿರ್ತಾರ..ಹಿಂಗ ಸಲ್ಪ ದಿನದ ಹಿಂದ ಸಲ್ಪ ಮಂದಿ ವಾಕಿಂಗ್ ಅಂತ ಬಂದು ಹರಟಿ ಹೊಡಕೋತ ಕೂತಿದ್ರು..ಸಲ್ಪ ಹೊತ್ತಿನ ಮ್ಯಾಲೆ "ಮಳೆ ಬರ್ತಾ ಇದೆ ಅಂತೆ..ಮಳೆ ಬರ್ತಾ ಇದೆ ಅಂತೆ.." ಅಂತ ಮಾತಾಡೋದು ತಪ್ಪಿ ನನ್ನ ಕಿವಿಗೆ ಬಿತ್ತು. ನಾನು ಅವರ ಹತ್ರ ಹೋಗಿ ಕೇಳಿದಾಗ ಅವರು ಹೇಳಿದ್ರು.."ಸಾರ್ ಕ್ಯಾಲ್ಕಟ್ಟಾ ನಲ್ಲಿ ಮಳೆ ಆಗ್ತಾ ಇದೆ ಅಂತೆ..2-3 ದಿನ ಡಿಪ್ರೆಷೆನ್ನು". ಆತ್ ತೊಗೊ ಇನ್ನು 2-3 ದಿನ ತಣ್ಣೀರು ಸ್ನಾನನ ಗತಿ ಅಂತ ಗೊಣಗಿಕೊಳ್ಲಕೋತ ಬಂದೆ. ಅಲಾ ಇವನ ಸಾವಿರಾರು ಮೈಲಿ ದೂರ ಇರೋ ಕಲ್ಕತ್ತದಾಗ ಮಳಿ, ಡಿಪ್ರೆಶನ್ ಆದ್ರ ನಮ್ಮ ಬೆಂಗಳೂರು ಒಳಗ ಯಾಕ ತಣ್ಣೀರು ಸ್ನಾನ ಅಂತ ಕೇಳ್ತೀರೇನು..ಇಲ್ಲ್ ಬೆಂಗಳೂರು ಒಳಗ ಹಂಗರಿಪಾ..ಕಲ್ಕತ್ತಾ ದೊಳಗ, ಚೆನ್ನೈ ಒಳಗ, ಹೈದ್ರಾಬಾದ್ ಒಳ್ಗ ಎಲ್ಲೇ ಮಳಿ ಆಗ್ಲಿ ಬೆಂಗಳೂರು ಒಳಗ ಇರ್ಲಿ ಅಂತ ಬಫರ್ ಇಟ್ಕೊಂಡು ಒಂದು ದಿನ ಹೆಚ್ಚ ಮಾಡಾ ಹಾಕಿಬಿಡ್ತದ..ಹಂಗ ಸಲ್ಪ ಜಿಟಿ ಜಿಟಿ ಮಳೀನೂ ಬರ್ತದ..ಹಿಂಗ ಆತು ಅಂದ್ರ ಮನಿ ಮ್ಯಾಲೆ ಇರೋ ಸೋಲಾರ್ ವಾಟರ್ ಹೀಟರ್ ಹೆಂಗ ಕೆಲಸಾ ಮಾಡಬೇಕು ಹೇಳ್ರಿ...ಅದಕ್ಕ ನಮಗ ತಣ್ಣೀರು ಸ್ನಾನ !! ದೇಶದ  ಎಲ್ಲಾದ್ರೂ ಡಿಪ್ರೆಶನ್ ಅಂದ್ರ ನಮಗೂ ಒಂದು ಥರ ಡಿಪ್ರೆಶನ್ ಸುರು ಆಗ್ತದ..ತಣ್ಣೀರು ಸ್ನಾನ ಸುರು ಆಗ್ತದ..

Tuesday, July 23, 2013

ಆಹಾಹಾ ಎನ ಸ್ವರ್ಗರಿಪಾ....

ಆಬಾಬಾ ಎನ್ ಥಂಡಿ ಇದು..ಚಳಿಗಾಲದ ಮೈ ಕೊರಿಯೋ ಹಂಗ ಭಾರೀ ಅದ. ಜಿಟಿ ಜಿಟಿ ಸುರಿಯೋ ಮಳಿ..ಆ ಹನಿಗಳು ಗಾಳಿಯೊಳಗ ಕೂಡಿ ಮತ್ತಷ್ಟು ತಂಪ ಆಗೇದ. ಮನಿ ಬಿಟ್ಟು ಹೊರಗ ಕಾಲ್ ಇಟ್ಟರ ಗುಂಡಿ ಗುಂಡಿ ನೀರು. ಅಲ್ಲೇ ಹಾಳಿ ದೋಣಿ ಮಾಡಿ ಬಿಟ್ಟ್ರ ಸುತ್ತಲ ಗಿರಕಿ ಹೊಡಿತಾವ..ಹೆಚ್ಚು ಕಮ್ಮಿ ಆದ್ರ ಮುಳುಗಿ ಹೋಗತಾವ..ಇನ್ನೂ ಗುಂಡಿ ನಾ ದಾಟಲಿಕ್ಕೆ ಅಂತ ಜಿಗದ್ರ ಮತ್ತೊಂದು ಗುಂಡ್ಯಾಗರ ಇಲ್ಲಂದ್ರ ರಾಡಿಯೊಳಗರ ಕಾಲು ಮುಳುಗೊದು ಖರೆ..ಮತ್ತ ಚಪ್ಪ್ಲಿ ಗತಿ ಅಂತೂ ಅಧೋ ಗತಿ..ಮತ್ತ ಯಾವದೂ ರಿಸ್ಕ್ ಬ್ಯಾಡ ಅಂತ ಫುಟ್ ಪಾಥ್ ಮ್ಯಾಲೆ ಹೋಗೋಣ ಅಂದ್ರ ಪಾಥ್ ನಾ ಇಲ್ಲ ಅಲ್ಲೆ. ಹಂಗು ಹೀಂಗೂ ಸರ್ಕಸ್ ಮಾಡಿ ಹೊಂಟ್ರ ಯಾವದೋ ಒಂದು ಕಾರ್ ಜೋರಾಗಿ ಹೋತು ಅಂದ್ರ ಅಂಗಿ ಎಲ್ಲ ಕಲರ್ ಫುಲ್ ಆಗಿ ಬಿಡ್ತದ.
ಇಷ್ಟೆಲ್ಲ ಯಾಕ್ ಬೇಕಪಾ ಅಂತ ಸುಮ್ನ ಮನ್ಯಾಗ ಕಿಡಕಿ ಬಾಜುಕ ಆರಾಮ ಖುರ್ಚೆ ಮ್ಯಾಲೆ ಕೂತು ಬಿಸಿ ಬಿಸಿ ಖಾರ್ ಖಾರ್ ಮಿರ್ಚಿ, ಅದರ ಜೋಡಿ ಅವಲಕ್ಕಿ ಚೂಡಾ ತಿಂದು ಮತ್ತ ಮ್ಯಾಲೆ ಮಸ್ತ ಛಾ ಕೂಡದ್ರ ಆಹಾಹಾ ಎನ ಸ್ವರ್ಗರಿಪಾ....

ನನ್ನ ಮಗಳು ಅದೃಷ್ಟವಂತೆ..

ಬೆಳಿಗ್ಗೆ ಸೊಂಪಾದ ನಿದ್ದೆ ಇಂದ ಯೆದ್ದೇಳಲು ಅಲಾರ್ಮ ಬೇಕಿಲ್ಲ..ಪಕ್ಕದಲ್ಲೇ ಇರುವ ಕೋಳಿಗಳ ಕೂಗು ಆ ಕೆಲಸ ಮಾಡಿ ಮುಗಿಸುತ್ತದೆ. ಪುಟ್ಟ ಕೈಗಳಿಂದ ಕಣ್ಣು ಗಳನ್ನು ಉಜ್ಜುತ್ತಾ ಹೊರಗೆ ಬರುವಷ್ಟರಲ್ಲಿ ಈಶಾನ್ಯದಿಕ್ಕಿನಿಂದ ಮುಖದ ಮೇಲೆ ಬಿದ್ದು ಹಾಲು ಗಲ್ಲವ ಮುದ್ದಾಡುವ ಎಳೆ ಬಿಸಿಲು..ಆಗಲೇ ಹುಟ್ಟಿದ ಸೂರ್ಯ ಇವಳ ಗಲ್ಲದ ಕೆಂಬಣ್ಣ ಕೆ ಹೊಂಬಣ್ಣ ಬಳಿದ..ಮನೆ ಮುಂದೆ ಬೆಳೆದ ಹಚ್ಚ ಹಸಿರಿನ ಹುಲ್ಲು ಅದರ ಮೇಲೆ ಬಿದ್ದ ಮಂಜಿನ ಹನಿಯ ಬಡಿದು ಬಡಿದು ಆಡಿ ಮೈ ನ ತೋಯಿಸಿಕೊಂಡಮೈನಾ..ಮನೆ ಮೇಲೆ ಇವಳು ಏಳುವದನ್ನ್ ಕಾದು ಕುಳಿತಿದ್ದ ಗುಬ್ಬಿ..ಮಾತಾಡಲು ಶುರು ಮಾಡ್ತು ಚಿವ್ ಚಿವ್ ..
walking ಮಾಡುವದು ಅವಳ ಬೆಳಗಿನ ಆರಂಭದ ಕೆಲಸಗಳ ಆರಂಭ. ಮನೆಯ ಪಶ್ಚಿಮ ದಿಕ್ಕಿನಲ್ಲಿ ಕೂಗಳತೆ ದೂರದಲ್ಲಿಯ ತೋಟಗಳ ಬಳಿ ಇರುವ ಮಣ್ಣಿನ ದಾರಿ ಇವಳ ಪುಟ್ಟ ಪುಟ್ಟ ಹೆಜ್ಜೆಗಳಿಂದ ತುಂಬಿರುತ್ತದೆ. ತೋಟಗಳ ಮೊದಲಿಗೆ ಬರುವದು ತುಳಸಿಯದು. ಕೃಷ್ಣ ತುಳಿಸಿಯ ಘಮ್ಮನೆಯ ವಾಸನೆ ಇವಳನ್ನು ಸ್ವಾಗತಿಸುತ್ತದೆ ಹಾಗೆ ಸಲ್ಪ ಮುಂದೆ ಹೋದರೆ ಕನಕಾಂಬರ ತೋಟ..ಹಸಿರು ಹಸಿರು ಎಲೆಗಳ ಮೇಲೆ ಕೆಂಪು ಮಿಶ್ರಿತ ಕೇಸರಿ ಕನಕಾಂಬರ ಹೂಗಳು..ಅವುಗಳ ಮಕರಂದ ಹೀರಲು ಬಂದ ಬಣ್ಣ ಬಣ್ಣದ ಪಾತರಗಿತ್ತಿಗಳು ಕಳಸಗಿತ್ತಿಗಳಾಗಿ ಜೊತೆಗೆ ಬಂದು ಮುಂದೆ ಬರುವ ತೆಂಗು ಹಾಗೂ ಬಾಳೆ ತೋಟಗಳ ಬಳಿ ಕಳುಹಿಸಿ ಹೋಗುತ್ತವೆ..ಅಲ್ಲಿರುವ ಪುಟ್ಟ ಪುಟ್ಟ ಗಿಳಿಗಳ ಜೊತೆ ಇವಳ ಹರಟೆ..ಇದನ್ನು ಕೇಳಲು ಎರಡು ಕಿವಿ ಸಾಲದು ! ಅಲ್ಲೇ ಸಲ್ಪ ಮುಂದಿರುವ ಕೆರೆಯಲ್ಲಿ ಸಲ್ಪವೇ ಸಲ್ಪ ನೀರಿದ್ದರೂ ಅದು ಬಿಳಿ ಕೊಕ್ಕರೆಯ ವಿಹಾರ ತಾಣ..ಅಲ್ಲಿ ಹಾರಾಡುವ ಅವನ್ನು ನೋಡಿ ನನ್ನ ಮಗಳು ಇಲ್ಲೇ ತನ್ನ ಕೈಯನ್ನು ರೆಕ್ಕೆ ಮಾಡಿಕೊಳ್ಳುತ್ತಾಳೆ..
ಸೂರ್ಯ ದಿನದ ತನ್ನ ಪ್ರಯಾಣ ಮುಗಿಸುವ ಹೊತ್ತಿಗೆ ಕಪ್ಪು ,ಬಿಳಿಪು ಹಾಗೂ ಮಿಶ್ರಿತ ಬಣ್ಣಗಳ ಹಸುಗಳು, ಕರುಗಳು, ಕುರಿಗಳು ಮನೆಯ ಮುಂದೆ ಇರುವ ಹುಲ್ಲು ಮೇಯುವಾಗ ಆಗುವ ಆ ಕೊರಳ ಘಂಟೆಗಳ ನಾದ ಇವಳಿಗೆ dance ಮಾಡಲು ಒಂಥರಾ ಪ್ರೇರಣೆ ಮಾಡುತ್ತವೆ..ಇನ್ನೂ 'ಚಂದಾ ಮಾಮ ಓಡಿ ಬಾ..ಪುಟಾಣಿ ಕೂಡ ಆಡು ಬಾ' ಅಂತ ಹಾಡುವ ಮೊದಲೇ ಆ ಚಂದಿರ ಬಾನಂಗಳಕ್ಕೆ ಬಂದು ಇವಳ ಜೋಳಿಗೆಗೆ ಜಾರಿಸುತ್ತಾನೆ...
ಇದೆಲ್ಲ ಪಡೆದ ನನ್ನ ಮಗಳು ಎಲ್ಲ ಮಕ್ಕಳಂತೆ ರಾಜಧಾನಿ ಎಂಬೋ concrete ಕಾಡಲ್ಲಿ ಇದ್ದರೂ ಸಹ ಬಹುಶಃ ಎಲ್ಲರಿಗೂ ಸಿಗದ ಅದೃಷ್ಟ ಪಡೆದಿದ್ದಾಳೆ..ಅದೃಷ್ಟವಂತೆ!!!!!!!!!!

Tuesday, June 18, 2013

ಮತ್ತದೇ ಮಳೆ..ಮತ್ತದೇ ಹನಿ..
==========
ಮತ್ತದೇ ಮಳೆ..ಮತ್ತದೇ ಹನಿ..
ಮತ್ತದೇ ನೆನಪು..

ಮಾಸಗಳು ಕಳೆದರೂ ಮಾಸದ ನೆನಪು
ಹಸಿ ಹಸಿಯಾದ ನೆಲದಲಿ ಕಸಿಯಾದ ಚಿಗುರು

ಒಂದೊಂದು ಹನಿಯೂ ಒಂದೊಂದು ರೀತಿಯ
ಪ್ರೀತಿಗೆ ಸನಿಹ..ಮನಸಿನಲಿ ಒಂದು ಕಲಹ

ಏನೋ ಹೇಳುವ ಭರದಲಿ ಬಂದು ಬೀಳುತಿವೆ
ಮಳೆಯ ಮರಿಗಳು..ಅವು ಮರೆಯದ ಭಾವಗಳು

--ಜಯತೀರ್ಥ

Thursday, June 3, 2010

ಉಪ್ಪಿನಕಾಯಿ

ಜೀವನ ಒಂದು ರುಚಿ ಉಪ್ಪಿನಕಾಯಿ..
ಸಿಹಿ ಇಲ್ಲ ಹಣ್ಣಿಲ್ಲ.. ಹೌದು...ಬರೀ ಉಪ್ಪು,ಕಾಯಿ.......

ಆಟ...ಜೂಜಾಟ

ಮದುವೆ ಒಂದು ಜೂಜಾಟ
ಜೀವನ ತುಂಬಾ ಜಂಜಾಟ...
ಬರೀ ಅವಳದೇ ಆಟ
ನಮ್ಮದೆಲ್ಲ ಬರೀ ನೋಟ !!