Friday, July 26, 2013

ರೇಡಿಯೋ ಕಾಲ

                                            ಮೊನ್ನೆ ಔಟರ್ ರಿಂಗ್ ರೋಡ್ ಮ್ಯಾಲೆ  ಆಫೀಸ್ ಇಂದ ಮನಿಗೆ ಬರೋವಾಗ ಎರಡು ತಾಸಿಯಾನ ಪ್ರಯಾಣ ಬ್ಯಾಸರ ಆಗಬಾರ್ದು ಅಂತ ಮೊಬೈಲ್ ಒಳಗಿನ ರೇಡಿಯೋ ಹಚ್ಚಿದೆ..ಸ್ಟೇಶನ್ ಬದ್ಲಿ ಮಾಡೋ ಮುಂದ ವಿವಿಧ ಭಾರತಿ ಬಂತು..ಅದ್ರೊಳಗs ಸಲ್ಪ ಕೇಳೋಣ ಅಂತ ಬ್ಯಾರೆ ಬದ್ಲಿ  ಮಾಡ್ಲಿಲ್ಲ..ಒಂದs  ನಿಮಿಷಕ್ಕ ಮನಸ್ಸು 20-25 ವರ್ಷ ಹಿಂದಕ್ಕ ಹೋತು..
                      ಆವಾಗಿನ್ನ ಟೀವಿ ಬಂದಿದಿಲ್ಲ..ಮನರಂಜನೆ ಅಂದ್ರ ರೇಡಿಯೋ ಒಂದs..22 ಇಂಚು ಡಬ್ಬಿ ಇರತಿತ್ತು ..ಅದು ಗಣಪತಿ ಹಂಗ ಒಂದು ಮಾಡ್ದಾಗ ಕೂತಿರ್ತಿತ್ತು,ಧೂಳು ಬೀಳಬಾರ್ದು ಅಂತ ಒಂದು ಬೇಡ್‌ಶೀಟ್ ಮಡಚಿ ಹೋಚಿಕೊಂಡಿರ್ತಿತ್ತು. ಅದರ ಕೆಲಸ ಮುಂಜಾನೆ ಆಕಾಶ್ ವಾಣಿ ಸಿಗ್ನಿಚರ್ ಟ್ಯೂನ್ ಇಂದ ಸುರು ಆಗ್ತಿತ್ತು..ಆಮೇಲೆ 6 ಗಂಟೆಗೆ ಸಂಸ್ಕ್ರತ ವಾರ್ತೆಗಳು.ಸಂಸ್ಕ್ರತ ಬರ್ತಿದ್ದಿಲ್ಲ ಅಂದ್ರು ಕೇಳಿಕ್ಕೆ ಒಂದು ಥರ ಹೆಮ್ಮೆ..ಹಾ..ಆ ವಾರ್ತೆಗಳು ಕೇಳೋದಕ್ಕ ಇನ್ನೂಂದು ಕಾರಣ ಅಂದ್ರ ಟೈಮ್ ಗೊತ್ತಾಗ್ಲಿಕ್ಕೆ. ಈಗಿನ ಹಂಗ ಕೈ ಒಳಗ ವಾಚ್ ಇರ್ತಿದ್ದಿಲ್ಲ..ಮನಿಗೆ ಒಂದs  ಗಡಿಯಾರ ಗ್ವಾಡಿ ಮ್ಯಾಲೆ ಕೂತಿರ್ತಿತ್ತು..ಅದನ್ನ ನೋಡೋ ಟೈಮ್ ಇರ್ತಿದ್ದಿಲ್ಲ..ಸಾಲಿಗೆ ಹೋಗೋ ತಯಾರಿ ಮಾಡ್ಕೋ ಬೇಕಿತ್ತಲ್ಲ  ..ಆಮೇಲೆ ಮಧ್ಯಾನ ರೇಡಿಯೋ ಒಳಗ ಏನು ಬರ್ತಿತ್ತೋ ಗೊತ್ತಿಲ್ಲ.
                      ಸಂಜಿಮುಂದ ಸಾಲಿ ಇಂದ ಬಂದು ಆಟಾ ಆಡಿ ಮನಿ ಮುಟ್ಟೊದ್ರಾಗ ರೇಡಿಯೋ ಒಳಗ ರೈತರಿಗೆ ಸಲಹೆ ಬರ್ತಿತ್ತು..ಅದು ಆದಮ್ಯಾಲೆ"ಫೌಜಿ ಭಾಯಿ ಯೊಂಕೇಲಿಯೇ ನಮಾಷ್ಕರ್" ಅಂತ  ಜಯಮಾಲಾ ಸಿನೆಮಾ ಹಾಡುಗಳು ಬರತಿತ್ತು..ಯಾವ ಯಾವ ಊರಿಂದ ಯಾವ ಸೈನಿಕರು ರಿಕ್ವೆಸ್ಟ್ ಕಳಿಸಿದ್ರು ಅಂತ ಎಲ್ಲಾರ್ ಹೆಸರು ಹೇಳ್ತಿದ್ರು..ಆಮೇಲೆ ಶಾಸ್ತ್ರೀಯ ಸಂಗೀತ..ಶ್ರೀ ಭೀಮಸೇನ ಜೋಶಿ, ಶ್ರೀ ಬಸವರಾಜ್ ರಾಜಗುರು, ಶ್ರೀ ವೆಂಕಟೇಶ್ ಗೋಡ್ಖಿಂಡಿ ಅವರದೆಲ್ಲ ಹಾಡು ಬರ್ತಿತ್ತು..  ಕಡೀಕ ರಾತ್ರಿ 9 ಗಂಟೆಗೆ "ಮನೆ ಮನೆ ಯಲ್ಲಿ" ಅಂತ ಒಂದು ನಾಟಕ ಬರ್ತಿತ್ತು. ಅದ್ರಾಗ ಮಾನ್ಯ  ಯಮುನಾ ಮೂರ್ತಿ ಅವರ್ದು ಕಾಯಂ ಒಂದು ಪಾತ್ರ..ಅದು ಆದ ಮ್ಯಾಲೆ ವಾರ್ತೆಗಳು ದೆಹಲಿ ಕೇಂದ್ರದ ಸಹ ಪ್ರಸಾರದಿಂದ ಅಂತ ದೇಶದ ಎಲ್ಲ ಸುದ್ದಿ ಕೇಳಿ ಮಲಗೋದು..
                     ಇನ್ನ ಆದಿತ್ಯವಾರ ಮಕ್ಕಳಿಗೆ ಅಂತ ನ "ಗಿಳಿವಿಂಡು" ಬರ್ತಿತ್ತು..ಅದ್ರಾಗ ನಮ್ಮ ಜೇವೂರ್ ಟೀಚರ್ ಕಾರ್ಯಕ್ರಮ ನಡಿಸಿ ಕೊಡ್ತಿದ್ರು..ಮತ್ತ ದಿವಸಕ್ಕ ಮೂರು ಸರ್ತಿ ಕನ್ನಡ ವಾರ್ತೆಗಳು ಬರತಿತ್ತು.. "ವಾರ್ತೆಗಳು..ಓದುತ್ತಿರುವವರು ನಾಗೇಶ್ ಶಾನಭಾಗ್" ಇನ್ನೂ ಕಿವಿ ಒಳಗ ಪ್ರತಿಧ್ವನಿ ಆಗ್ತದ. ಇನ್ನ ಯಾವದಾದ್ರು ಕ್ರಿಕೆಟ್ ಮ್ಯಾಚ್ ನಡಿದಿತ್ತು ಅಂದ್ರ ಇಲ್ಲೆ ವೀಕ್ಷಕ ವಿವರಣೆ ಕನ್ನಡ,ಹಿಂದಿ,ಇಂಗ್ಲೀಷ್ ಮೂರು ಭಾಷಾದಾಗ ಹೇಳ್ತಿದ್ರು..ಅಗ್ದೀ ಇಂಪಾರ್ಟೆಂಟ್ ಟೈಮ್ ಒಳಗ ರೇಡಿಯೋ ದು ಸಿಗ್ನಲ್ ಸಮಾ ಬರ್ತಿದ್ದಿಲ್ಲಾ..ಕರ್ರ್  ಅಂತಿತ್ತು..ಸಮಾ ಬರ್ಲಿ ಅಂತ ಅದರ ಮಾರಿ ಎಡಕ್ಕ ಬಲಕ್ಕ ತಿರಗಿಸಿ, ಅದರ ತಲಿಗೆ , ಬೆನ್ನಿಗೆ ಜೋರಾಗಿ ಹೊಡದ್ರ ಸಮಾತ್ನ್ಯಾಗಿ ಕೇಳಸ್ತಿತ್ತು..
ಅಲಾ ಇವನ ಯಾರೋ ದೂಕಿದ ಹಂಗ ಆತು ಅಂತ ಹಿಂದ ನೋಡಿದ್ರ ಆಗ್ಲೇ ಸಿಲ್ಕ್‌ಬೋರ್ಡ್ ಸಿಗ್ನಲ್ಗೆ ಬಂದು ನಿಂತಿದ್ದೆ..ಹಿಂದಿನ ಗಾಡಿಯವ ನನ್ನ ಬೈಕ್ ಗೆ ಟಚ್ ಮಾಡಿದ್ದ..
                  ಹಸಿರ ಸಿಗ್ನಲ್ ಬಿತ್ತು..ಅವಾ ಸಾರೀ ಅಂದು ಮುಂದ ಹೋದ..ನಾನೂ ಹೊಂಟೆ ಆದ್ರ ನನ್ನ ಮನಸು ರೇಡಿಯೋ ಯುಗ ದಾಟಿ ಟೀವಿ ಯುಗಕ್ಕ ಬಂತು..ಅದನ್ನ ಮುಂದ ಯಾವಾಗರ ಹೇಳ್ತೇನಿ..

No comments:

Post a Comment